Thursday, January 13, 2011

ಸವಿ ಸವಿ ನೆನಪು....

ಈ ಘಟನೆ ನಡೆದದ್ದು ಸುಮಾರು ೮ ವರ್ಷಗಳ ಹಿಂದೆ.
ನಾನು ೭ನೇ ತರಗತಿ ಮುಗಿಸಿ ೮ನೇ ಪ್ರವೇಶಿಸುವಾಗ ದೇವಭಾಷೆಯಾದ ಸಂಸ್ಕೃತ ಅಥವಾ ರಾಷ್ಟ್ರಭಾಷೆಯಾದ ಹಿಂದಿಯನ್ನು ಆಯ್ಕೆ ಮಾಡಬೇಕಾಗಿತ್ತು.ನಾನು ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಂಡೆ.ಏಕೆಂದರೆ ನನಗೆ ಹಿಂದಿ ಭಾಷೆ ೫ನೇ ತರಗತಿಯಿಂದಲೀ ಸ್ವಲ್ಪ ಕಷ್ಟವಾಗುತ್ತಿತ್ತು ಹಾಗೂ ನನ್ನ ಮೂವರೂ ಅಕ್ಕಂದಿರೂ ಸಹ ಸಂಸ್ಕೃತವನ್ನೇ ಆಯ್ಕೆ ಮಾಡಿಕೊಂಡಿದ್ದರು.೧ ತಿಂಗಳ ಬಳಿಕ ತರಗತಿ ಪ್ರಾರಂಭವಾಯಿತು.ವಿದ್ಯಾಭ್ಯಾಸವೂ ಸರಾಗವಾಗಿ ಮುಂದುವರೆಯಿತು.
ನಮ್ಮ ಸಂಸ್ಕೃತ ಉಪನ್ಯಾಸಕರು ಪಿ.ಗೋವಿಂದ ಭಟ್ಟರು.ಬಹಳ ಮೇಧಾವಿ. ಅವರ ಸಂಸ್ಕೃತ ವ್ಯಾಕರಣವೆಂದರೆ ಬಹಳ ಉತ್ತಮವಾಗಿತ್ತೆಂದು ಅಕ್ಕಂದಿರು ಹೇಳುತ್ತಿದ್ದರು.ಅದೊಂದು ಶನಿವಾರ ನನಗೆ ತೀವ್ರವಾದ ಜ್ವರ ಬಂದಿತ್ತು.ಶನಿವಾರವಾಗಿದ್ದ ಕಾರಣ ಮೈಸೂರಿನಲ್ಲಿ ಆಯುರ್ವೇದ ಕಲಿಯುತ್ತಿದ್ದ ಚೇತಕ್ಕ(ಚೇತನಾ) ಹಾಗೂ ಉಕ್ಕ(ಉಷಾ) ಬಂದಿದ್ದರು.ನಾನು ಶಾಲೆಗೇ ಹೋಗುತ್ತೆನೆಂದರೂ ಸಹ ಬೈಗುಳಗಳ ಮಳೆಯನ್ನು ಸುರಿಸಿ  ಇಡೀ ದಿನ ಹಾಸಿಗೆ ಬಿಟ್ಟು ಏಳದಂತೆ ಮಾಡಿದ್ದರು .ಅದೇ ಶನಿವಾರ ನಮ್ಮ ಸಂಸ್ಕೃತ ಉಪನ್ಯಾಸಕರು ವ್ಯಾಕರಣ ವಿಷಯವಾಗಿ ಪಾಠ ಮಾಡಿದ್ದರು ಎಂಬುದನ್ನು ನನ್ನ ಬಾಲ್ಯ(ಬಾಲ) ಸ್ನೇಹಿತ ಅಜೇಯನ ಮೂಲಕ ಕೇಳಿ ತಿಳಿದುಕೊಂಡೆ.ಆದರೆ ವ್ಯಾಕರಣ ಕಲಿಯುವ ಗೋಜಿಗೆ ಹೋಗಲಿಲ್ಲ.ಏಕೆಂದರೆ ಆಗ ನನಗೆ ವ್ಯಾಕರಣದ ಮಹತ್ವ ತಿಳಿದಿರಲಿಲ್ಲ.
ಜುಲೈ ತಿಂಗಳ ಕೊನೆಗೆ ನಮಗೆ ಕಿರು ಪರೀಕ್ಷೆಯ ಸಂಭ್ರಮ.ಪರೀಕ್ಷೆಗಳು ಮುಗಿದ ಬಳಿಕ ಮನೆಯಲ್ಲಿ ಮಾಮೂಲಿ ಪ್ರಶ್ನೆ,
"ಪರೀಕ್ಷೆ ಹೇನ್ಗಿತ್ತು?"
ಧ್ವನಿ ಸುರುಳಿ ಹಾಕಿದಂತೆ ಉತ್ತರ "ಸುಲಭ ಇತ್ತು".
ಬಳಿಕ ೪ ದಿವಸಗಳ ಕಾಲ ಆಟ ಊಟ ಇತ್ಯಾದಿ.ಪಾಠಗಳನ್ನು  ಓದಲೇ ಇಲ್ಲ.೫ನೇ ದಿನ ಅಮ್ಮನ ಮುಖದಲ್ಲಿ ಎಂದೂ ಕಾಣದಂತಹ ರೂಪ.ಕಾರಣವೇನೆಂದು ಕೇಳಿದಾಗ,
"ಸಂಸ್ಕೃತ ಪರೀಕ್ಷೆ ಹೇನ್ಗಿತ್ತು?"
"ಸುಲಭ ಇತ್ತು"-ನನ್ನ ಉತ್ತರ.
ಮುಂದಿನದು ಸುಮಾರು ಅರ್ಧ ಘಂಟೆಗಳ ಕಾಲ ಅಮ್ಮನ ಬಾಯಿಯಿಂದ ಗುಡುಗು-ಸಿಡಿಲು ಗಳು,ಸಾಲದೆಂಬಂತೆ ಮೊದಲೇ ಮಳೆಗಾಲ.ಅದರೊಡನೆ ತಾಯಿಯ ಕಣ್ಣಿಂದ ಗಂಗೆಯು ಅವತರಿಸಿದ್ದಳು.ಬಳಿಕ ಅಮ್ಮ ಹೇಳಿದರು.ನನಗೆ ಸಂಸ್ಕೃತ ಪರೀಕ್ಷೆಯಲ್ಲಿ ದೊರೆತ ಅಂಕಗಳು ೨೫ರಲ್ಲಿ ೦೮ ಎಂಬುದಾಗಿ ಉಪನ್ಯಾಸಕರು ಹೇಳಿದ್ದರಂತೆ.ನಾನಾದರೋ "೦೮ ಆಗಿರ ೧೮ ಆದಿಕ್ಕು.ಸುಮ್ಮನೆ ಗೊಂತಿಲ್ಲದ್ದೆ ಬೊಬ್ಬೆ ಹಾಕೆಡ" ಎಂದು ವಿಶ್ವಾಸದಲ್ಲಿ ನುಡಿದೆ.ಅಮ್ಮನೂ ಸಹ "ಆದಿಕ್ಕು.ಮಾಷ್ಟ್ರಿನ್ಗೆ ತಪ್ಪಿದ್ದಾದಿಕ್ಕು"ಎಂದರು ಖಾರವಾಗಿ,ವ್ಯಂಗ್ಯವಾಗಿ.
೧ ವಾರ ಕಳೆದು ಪರೀಕ್ಷೆಯ ಉತ್ತರ ಪತ್ರಿಕೆಗಳು ದೊರೆತವು.ಸಂಸ್ಕೃತ ಯ್ತ್ತರ ಪತ್ರಿಕೆಗಳನ್ನು ಒಂದೊಂದಾಗಿ  ಬಹುಮಾನ ವಿತರಿಸಿದಂತೆ  ವಿತರಿಸಿದರು."ಶ್ರೀಕೃಷ್ಣ.ಪಿ.ಐ" ಎಂದಾಗ ನಾನು "ಜೈ" ಎಂಬ ಉದ್ಗಾರದೊಂದಿಗೆ ಸಂತೋಷದಿಂದ  ಹೋಗಿ ಇಣುಕಿ ನೋಡಿದಾಗ ಅಂಕಗಳು ೨೫ರಲ್ಲಿ ೦೮!!ಅಮ್ಮನಿಗೆ ಉಪನ್ಯಾಸಕರು ಹೇಳಿದ ವಿಷಯ ಸತ್ಯವಾಗಿತ್ತು.ಬಳಿಕ ಉಪನ್ಯಾಸಕರು ನನ್ನ ಒಳ್ಳೆಯದಕ್ಕಾಗಿ ಮನಸ್ಸಿಗೆ ನಾಟುವಂತಹ ಕೆಲವು ಮಾತುಗಳನ್ನು ಹೇಳಿದರು."ಹಾ!ಶ್ರೀಕೃಷ್ಣ.ನೀನು ಕಲಿಯುವುದರಲ್ಲಿ ಇಷ್ಟು ದಡ್ಡ ಎಂದು ಗೊತ್ತಿದ್ದರೆ ನಾನು ನಿನ್ನಲ್ಲಿ ಸಂಸ್ಕೃತ ಆರಿಸಿಕೊ ಎಂದು ಹೇಳುತ್ತಿರಲಿಲ್ಲ.ನಿನ್ನ ಅಕ್ಕಂದಿರು ನನ್ನ ವಿದ್ಯಾರ್ಥಿನಿಯರೇ.ಅವರು ಕಲಿಯುವುದರಲ್ಲಿ ಮುಂದಿದ್ದರು.ನೀನೇಕೆ ಹೀಗೆ?"ಎಂದಿದ್ದರು .ಬಹಳ ಬೇಸರವಾಯಿತು .ಬಳಿಕ ಸಂಸ್ಕೃತ ವ್ಯಾಕರಣವನ್ನು ಕೊನೆಯ ಅಕ್ಕ ಅಪ್ಪು(ಅಪರ್ಣಾ) ವಿನ ಬಳಿ ಕೇಳಿ ತಿಳಿದುಕೊಂಡೆ.'ಲಕಾರ'ಗಳನ್ನು ಉರು ಹೊಡೆದೆ.ಬಳಿಕ ನಡೆದ ೨ನೆ ಕಿರು ಪರೀಕ್ಷೆಯಲ್ಲಿ 25 ರಲ್ಲಿ ೧೭.೫ ಅಂಕಗಳು,ಅಂದರೆ ೧೦೦ ರಲ್ಲಿ ೭೦ ಅಂಕಗಳು ದೊರೆತವು.ಆಗ ಉಪನ್ಯಾಸಕರು "ಹಾ!ಶ್ರೀಕೃಷ್ಣ.ಕಲಿಯುವುದರಲ್ಲಿ ಮುಂದಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ "ಎಂದಾಗ ಖುಷಿಯಾಯಿತು . ಬಳಿಕ ನಡೆದ ಪರೀಕ್ಷೆಗಳಲ್ಲಿ ೮೦-೯೦ ಅಂಕಗಳು ದೊರೆತವು.೧೦ ನೆ ತರಗತಿಯಲ್ಲಿ ನಡೆದ ಮಧ್ಯಾವಧಿ ಪರೀಕ್ಷೆಯಲ್ಲಿ ೧೦೦ ರಲ್ಲಿ ೯೮ ಅಂಕಗಳು,ತರಗತಿಗೆ ಪ್ರಥಮನಾಗಿದ್ದೆ ಎಂಬ ನೆನಪು.
ಇನ್ನು ಪಿ.ಯು .ಸಿ ಯಲ್ಲಿ ಮಾಡಿದ ಕಪಿಚೇಷ್ಟೆಯ ಸುದ್ದಿ.ನಾನು,ಗೋವಿಂದರಾಜ ,ಕೌಶಿಕ್  last bench students .ಅಜೇಯ ನಂತಹ ಅನುಭವಿಗಳು,ಸೀತಾರಾಮ ನಂತಹ ಸೀನ್ತ್ರಿಗಳು ನಮ್ಮ ಮುಂದಿನ bench ನಲ್ಲಿ.ಇನ್ನು ಯಾರು ನಂಬದಂತಹ ಮೂಢನಂಬಿಕೆ ಗಳನ್ನು ಹೊತ್ತ ದಿಲೀಪ ನಂತಹವರು ಎದುರಿನ bench ನಲ್ಲಿ.ನಾನು,ಗೋವಿಂದ,ಕೌಶಿಕ್ ಉಪನ್ಯಾಸಕರು ತರಗತಿಗೆ ಪ್ರವೇಶಿಸಿದ ಬಳಿಕ ಪ್ರವೆಶಿಸುವವರು.ಆದ್ರೂ ಉಪನ್ಯಾಸಕರೇನೂ  ಹೇಳುತ್ತಿರಲಿಲ್ಲ.ಏಕೆಂದರೆ ಯಾರಿಗೂ ಉತ್ತರ ಗೊತ್ತಿರದಿದ್ದರೆ ಕೊನೆಗೆ ನಮ್ಮಲ್ಲಿ ಯಾರಾದರೂ ಒಬ್ಬ ಉತ್ತರ ನೀಡುತ್ತಿದ್ದ ಕಾರಣ ಮೌನವಾಗಿದ್ದರು. ನಮ್ಮಂತಹ ಉಪದ್ರ ಕೇಡಿಗಳು ಇನ್ನೊಬ್ಬರು ಇರಲಾರರೋ ಏನೋ !!ಇಂತಹ ಉಪದ್ರಗಳನ್ನು ತಡೆಯದ ನಮ್ಮ ಪ್ರೀತಿಯ ಉಪನ್ಯಾಸಕರು ಗೋವಿಂದನಲ್ಲಿ "ನೀನು ಕೃಷ್ಣ ನ ಬಳಿ ಕುಳಿತುಕೊಳ್ಳಬಾರದು" ಎಂಬುದಾಗಿ ತಿಳಿಸಿದ್ದರಂತೆ.ಇದನ್ನು ನನಗೆ ಹೇಳಿದ ಗೋವಿಂದನಲ್ಲಿ ಗೋವಿಂದರಾಜ ,ಕೌಶಿಕ್  ಬೇರೆ ಕುಳಿತುಕೊಳ್ಳಲು ಹೇಳಿ ನಾನು ಒಬ್ಬನೇ last bench student ಆಗಿ ಉಳಿದುಕೊಂಡೆ.ಈ ಬಾರಿ ಪ್ರತಿಯೋರ್ವನೂ ಮೌನವಾಗಿದ್ದರು.ಉಪನ್ಯಾಸಕರು ಕೇಳುವ ಯಾವ ಪ್ರಶ್ನೆಗಳಿಗೂ ಉತ್ತರ ನೀಡುತ್ತಿರಲಿಲ್ಲ.ಇದನ್ನರಿತ ಉಪನ್ಯಾಸಕರು ನನ್ನನ್ನು ಉಪನ್ಯಾಸಕರ ಕೊಠಡಿ ಗೆ ಬರಲು ಆಮಂತ್ರಣ ನೀಡಿದರು.ಬಳಿಕ ಅಲ್ಲಿ ಸ್ವಲ್ಪ ವಿದ್ಯಾರ್ಥಿ ಉಪದೇಶ ನೀಡಿದರು.ಬಳಿಕ ಎಂದಿನಂತೆನಾನು,ಗೋವಿಂದರಾಜ ,ಕೌಶಿಕ್  last bench students ಆದೆವು.ಸಾಲದೆಂಬಂತೆ ಹುಡುಗಿಯರನ್ನು ಚುಡಾಯಿಸಲಾರಮ್ಭಿಸಿದೆವು.ಅದನ್ನು ಅರಿತೋ ಏನೋ,ಇಂದಿಗೂ ನನ್ನಲ್ಲಿ ಪಿ.ಯು .ಸಿ ಯಾ ಕೆಲವು ಸ್ನೇಹಿತೆಯರು ಪೇಟೆಯಲ್ಲಿ ಸಿಕ್ಕರೆ ಮುಖ ತಿರುಗಿಸಿಕೊಂಡು ಹೋಗುತ್ತಾರೆ.ಅವರಲ್ಲಿ ಈ ಮೂಲಕ ನಾನು ಕ್ಷಮೆ ಕೇಳುತ್ತಿದ್ದೇನೆ.ನಮ್ಮ ಕಪಿಚೇಷ್ಟೆ ಈ ರೀತಿ ಮುಂದುವರೆಯಲು ದ್ವಿತೀಯ ಪಿ.ಯು.ಸಿ ಯ ಕೊನೆ ಬಂದೇ ಬಿಟ್ಟಿತು.ಉಪನ್ಯಾಸಕರು ಭಾರವಾದ ಹ್ರದಯದೊಂದಿಗೆ  ತರಗತಿಯಲ್ಲಿದ್ದ ಎಲ್ಲಾ ವಿದ್ಯಾರ್ಥಿ ಗಳಿಗೆ montex -high power ಪೆನ್ನನ್ನು ನೀಡಿ ಶುಭ ಹಾರೈಸಿ ಹೊರಟು ಹೋದರು.ಅವರ ಕಣ್ಣು ಆರ್ದ್ರವಾಗಿತ್ತು. ಜೊತೆಗೆ ನಮ್ಮ ಕಣ್ಣೂ ಸಹ.
ಮರ ಮುಪ್ಪಾಗಿದ್ದರೆ ಏನಂತೆ?ಅದರ ಹಣ್ಣಿನ ಸಿಹಿ ಮುಪ್ಪಾಗಲಾರದು.
ನೆನಪುಗಳು ಹಾಗೆಯೇ.ಪುಟವಿಟ್ಟ ಚಿನ್ನದಂತೆ.ನೆನಪಾದಾಗ ಕಣ್ಣನ್ನು ತೋಯಿಸಿ ಹೃದಯವನ್ನು ಭಾರವನ್ನಾಗಿಸಿ ಕಣ್ಣ ನೀರ ಹನಿಯು ಕೆನ್ನೆಯ ಮೇಲೆ ಹರಿದುಹೋಗಿಸುತ್ತದೆ ತನಗರಿವಿಲ್ಲದಂತೆ.

1 comment:

  1. kitta superb....remembered my full childhood.. those days r golden... hmmm not golden diamond days... i'll never forget that... but.. ಹೈ ಅದು "ಅನುಭವಿ ಅಜೇಯ" ಆದ್ದು ಹೇಂಗೆ?

    ReplyDelete